ರಾಜಕುಮಾರ್ 2

(1939-95). ಹಿಂದೀ ಚಲನಚಿತ್ರರಂಗದ ಪ್ರಮುಖ ನಟ. ಈತ ಪಾಕಿಸ್ತಾನದ ಸಿಯಾಲ್‍ಕೋಟ್ ಜಿಲ್ಲೆಯ ಲೊರಲಿ ಪಟ್ಟಣದಲ್ಲಿ 1939 ಅಕ್ಟೋಬರ್ 8ರಂದು ಜನಿಸಿದ. ಮೊದಲ ಹೆಸರು ಕುಲಭೂಷಣ್‍ನಾಥ್. ಜಗದೀಶ್ವರನಾಥ್ ತಂದೆ. ರಾಜಕುಮಾರ್ ಬಿ.ಎ.ಆನರ್ಸ್‍ವರೆಗೆ ಓದಿದರು. ಅನಂತರ ಚಲನಚಿತ್ರರಂಗ ಪ್ರವೇಶಿಸಿ 1952ರಲ್ಲಿ ರಂಗೀಲಿ ಚಿತ್ರದ ಮೂಲಕ ನಟನಾದರು. ಸಂಭಾಷಣೆಯ ಶೈಲಿಯೇ ವಿಶಿಷ್ಟ ವಿಶೇಷ, ಪ್ರೇಕ್ಷಕರನ್ನು ಮುಗ್ಧಗೊಳಿಸುವ ಅಭಿವ್ಯಕ್ತಿ. ನಾಲ್ಕು ದಶಕಗಳ ಕಾಲ ನಟರಾಗಿದ್ದ ಇವರದು ವಿಲಕ್ಷಣ ಸ್ವಭಾವ. ಈ ಪ್ರವೃತ್ತಿಯಿಂದಾಗಿ ಹಿಂದೀಚಿತ್ರರಂಗದಲ್ಲಿ ಬದುಕಿರುವಾಗಲೇ ದಂತಕಥೆಯಾಗಿದ್ದರು. ಹಿಂದೀ ಚಿತ್ರರಂಗದ ಸುಪ್ರಸಿದ್ಧ ನಟಿಯರಾದ ನರ್ಗೀಸ್, ಮೀನಾಕುಮಾರಿ, ಹೇಮಮಾಲಿನಿ, ರೇಖಾ ಮೊದಲಾದವರೊಡನೆ ಅಭಿನಯಿಸಿದ್ದಾರೆ. ವಕ್ತ್, ಮದರ್ ಇಂಡಿಯಾ, ಲಾಲ್‍ಪತ್ತರ್, ಮರ್ಯಾದ, ನೀಲ್‍ಕಮಲ್, ಶರಾರಾ, ಸೌದಾಗರ್ ಮುಂತಾದ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿವೆ. ಈ ಚಿತ್ರಗಳಲ್ಲಿನ ಇವರ ಅಭಿನಯ ಪ್ರತಿಭೆಗೆ ಸಾಟಿಯೇ ಇಲ್ಲವೆಂಬಷ್ಟು ವಿಶಿಷ್ಟವಾಗಿದೆ. ಸಣ್ಣ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಪ್ರತಿಭೆ ಇವರಲ್ಲಿತ್ತು.

ಇವರ ಹಳೆಯ ಚಿತ್ರಗಳಿಗೆ ಹೋಲಿಸಿದರೆ 90ರ ದಶಕದ ಚಿತ್ರಗಳಾದ ಪೊಲೀಸ್ ಪಬ್ಲಿಕ್, ಪೊಲೀಸ್ ಔರ್ ಮುಜ್ರಿಮ್, ಇನ್‍ಸಾನಿಯನ್ ಕಾ ದೇವತಾ-ಇವು ವಸ್ತುವಿನ ದೃಷ್ಟಿಯಲ್ಲಿ ಸಾಧಾರಣವೆನ್ನಬಹುದು. 1993ರಲ್ಲಿ ಮುಂಬಯಿಯಲ್ಲಾದ ಕೋಮು ಗಲಭೆ ಹಿನ್ನೆಲೆಯಲ್ಲಿ ಮಾಡಿದ ಚಿತ್ರ `ತಿರಂಗಾ ರಾಜಕುಮಾರ್ ದೃಷ್ಟಿಯಿಂದ ಬಾಕ್ಸ್ ಆಫೀಸ್‍ನಲ್ಲಿ ಹೊಸ ಅಲೆಯನ್ನು ಉಂಟುಮಾಡಿತ್ತು. ಇವರು ಅಭಿನಯಿಸಿದ ಹಲವು ಚಿತ್ರಗಳು ವ್ಯಾಪಾರಿ ದೃಷ್ಟಿಯಿಂದ ಯಶಸ್ವಿಯಾಗದಿದ್ದರೂ ಅಭಿಯನದ ದೃಷ್ಟಿಯಿಂದ ಪರಿಪೂರ್ಣವಾಗಿದ್ದವು. ರಾಜ್‍ಕುಮಾರ್ ಅವರಿಗೆ ಪ್ರಚಾರದ ಗೀಳಿರಲಿಲ್ಲ. 'ದಿಲ್ ಏಕ್ ಮಂದಿರ್ (1963) ಮತ್ತು 'ವಕ್ತ್ (1965) ಚಿತ್ರಗಳಲ್ಲಿನ ಅಭಿನಯಕ್ಕೆ 'ಫಿಲಂಫೇರ್ ಪ್ರಶಸ್ತಿ ಪಡೆದಿದ್ದಾರೆ. ಏಕಾಂಗಿಯಾಗಿರಲು ಇಷ್ಟಪಡುತ್ತಿದ್ದರು. ಯಾವ ಪತ್ರಕರ್ತರಿಗೂ ಸಂದರ್ಶನ ನೀಡುತ್ತಿರಲಿಲ್ಲ. 1995ರ ಜುಲೈನಲ್ಲಿ ಮುಂಬಯಿಯಲ್ಲಿ ನಿಧನಹೊಂದಿದ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ